ಬೆಂಗಳೂರು, ಏಪ್ರಿಲ್ 20: ಕಾಂಗ್ರೆಸ್ ಶಾಸಕ ಎನ್ಎ ಹ್ಯಾರಿಸ್ ಮತ್ತು ಅವರ ಪುತ್ರ ಮೊಹಮ್ಮದ್ ನಲಪಾಡ್ ನಿವಾಸಗಳ ಮೇಲೆ ಸೋಮವಾರ ಬೆಳಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆಸಿದೆ. ಬೆಂಗಳೂರಿನ ಅಶೋಕನಗರದಲ್ಲಿರುವ ಹ್ಯಾರಿಸ್ ನಿವಾಸ ಹಾಗೂ ಮೊಹಮ್ಮದ್ ನಲಪಾಡ್ ಮನೆಯ ಮೇಲೆ ದಾಳಿ ನಡೆದಿದೆ. ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ಇ.ಡಿ. ಅಧಿಕಾರಿಗಳು ಬೆಂಗಳೂರು ಸೇರಿದಂತೆ ಒಟ್ಟು 17 ಸ್ಥಳಗಳಲ್ಲಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಮೊಹಮ್ಮದ್ ನಲಪಾಡ್ ಹ್ಯಾಕರ್ ಶ್ರೀಕಿ ಜೊತೆ ನಂಟು ಹೊಂದಿದ್ದ ಆರೋಪಗಳು ಈ ಹಿಂದೆ ಕೇಳಿಬಂದಿದ್ದವು. ಈ ನಂಟಿನ ಹಿನ್ನೆಲೆಯಲ್ಲೇ ಇ.ಡಿ. ದಾಳಿ ನಡೆಸಿದೆ ಎನ್ನಲಾಗಿದೆ. ಶ್ರೀಕಿ ಮತ್ತು ನಲಪಾಡ್ ನಡುವೆ 4.5 ಕೋಟಿ ರೂಪಾಯಿಗಳ ಅಕ್ರಮ ವ್ಯವಹಾರ ನಡೆದಿದೆ ಎಂದು ಇಡಿ ಈಗಾಗಲೇ ಆರೋಪಿಸಿದೆ. ಈ ಹಿಂದೆ ರಾಜ್ಯ ಸಿಐಡಿ ಕೂಡ ಬಿಟ್‌ಕಾಯಿನ್ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್ ಅವರನ್ನು ವಿಚಾರಣೆ ನಡೆಸಿತ್ತು. ಸದ್ಯ, ಇ.ಡಿ. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.






Leave a comment